ತುಮಕೂರು: ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಪ್ರಭಾರ ಜಿಲ್ಲಾ ವ್ಯವಸ್ಥಾಪಕಿಯಾಗಿರುವ ಎ.ಸರೋಜದೇವಿ ಅವರು ಅಧಿಕಾರ ಹಸ್ತಾಂತರ ಕೊಡದೆ ನಿರ್ಲಕ್ಷ್ಯತನ ತೋರಿದ್ದು, ಕೂಡಲೇ ಅವರನ್ನು ಅಮಾನತ್ತು ಮಾಡಿ, ಎಸಿಬಿ ಮತ್ತು ಲೋಕಾಯುಕ್ತ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡ ದಲಿತ ಸಂಘಟನೆಗಳ ಮುಖಂಡರನ್ನುದ್ದೇಶಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಅವರು, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ತಾಲ್ಲೂಕು ಅಭಿವೃದ್ಧಿ ಅಧಿಕಾರಿಯಾಗಿ ಎ.ಸರೋಜದೇವಿ ಈ ಹಿಂದೆ ಕರ್ತವ್ಯ ನಿರ್ವವ್ಯಹಿಸುತ್ತಿದ್ದು ಇವರಿಗೆ ಕೇಂದ್ರ ಕಛೇರಿ ಪ್ರಭಾರ ಜಿಲ್ಲಾ ವ್ಯವಸ್ಥಾಪಕರ ಹುದ್ದೆಯನ್ನು ನೀಡಲಾಗಿತ್ತು, ಅವರ ನಿರ್ಲಕ್ಷ್ಯ ಮತ್ತು ಅಸಡ್ಡೆ ವರ್ತನೆಯಿಂದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಜಿಲ್ಲಾ ವ್ಯವಸ್ಥಾಪಕರ ಮೇಲೆ ಶಿಸ್ತುಕ್ರಮ ಜರುಗಿಸುವಂತೆ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದ ನಂತರ, ಅವರಲ್ಲಿದ್ದ ಪ್ರಭಾರ ಹುದ್ದೆಯನ್ನು ರೇಷ್ಮೆ ಇಲಾಖೆಯ ಉಪನಿರ್ದೇಶಕರಿಗೆ ನೀಡಲಾಗಿದೆ ಎಂದರು.
ಎ.ಸರೋಜದೇವಿ ಅವರು, ಹೆಚ್ಚುವರಿ ಪ್ರಭಾರ ಹುದ್ದೆಯ ಕರ್ತವ್ಯ ನಿರ್ವಹಣೆಯನ್ನು ಹಸ್ತಾಂತರಿಸದೇ, ಕಚೇರಿಯ ಜಿಲ್ಲಾ ವ್ಯವಸ್ಥಾಪಕರ ಕೊಠಡಿಗೆ ಬೀಗ ಹಾಕಿಕೊಂಡು ಹೋಗಿದ್ದು, ಇದುವರೆಗೂ ಕೊಠಡಿ ಬೀಗವನ್ನಾಗಲಿ, ಕರ್ತವ್ಯ ನಿರ್ವಹಣೆಯನ್ನು ಹಸ್ತಾಂತರಿಸದೇ ಅಸಡ್ಡೆ ತೋರಿದ್ದಾರೆ ಎಂದು ಆರೋಪಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವಾಹನವನ್ನು ಪ್ರಭಾರಿ ಜಿಲ್ಲಾ ವ್ಯವಸ್ಥಾಪಕಿಯಾಗಿದ್ದ ಎ.ಸರೋಜದೇವಿ ಅವರು ತಮ್ಮ ಸ್ವಂತ ಉಪಯೋಗಕ್ಕಾಗಿ ಬಳಸಿಕೊಂಡಿದ್ದು, ಇದುವರೆಗೂ ಕಚೇರಿಗೆ ವಾಹನವನ್ನು ನೀಡದೇ ಕರ್ತವ್ಯ ಲೋಪವನ್ನು ಎಸಗುತ್ತಿದ್ದಾರೆ. ಈ ಅಸಡ್ಡೆಯಿಂದ ಈಗ ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ತಾಂಡ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಅಲೆಮಾರಿ, ಅರೆ ಅಲೆಮಾರಿ ಜನಾಂಗದ ಕಾರ್ಯ ನಿರ್ವಹಣೆ ಕುಂಠಿತವಾಗಿದೆ ಎಂದು ಆಪಾದಿಸಿದರು.
ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಮಾತನಾಡಿ, ಎ. ಸರೋಜದೇವಿ ಅವರು ತಮ್ಮ ಅವಧಿಯಲ್ಲಿ ಪಲಾನುಭವಿಗಳಿಗೆ ನೀಡಿರುವ ಸೌಲಭ್ಯಗಳ ಬಗ್ಗೆ ಎಸಿಬಿ ಮತ್ತು ಲೋಕಾಯುಕ್ತದಿಂದ ಸೂಕ್ತ ತನಿಖೆ ನಡೆಸಬೇಕು, ಸದರಿ ಸರೋಜಾದೇವಿ ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು. ಇಂತಹ ಅಸಡ್ಡೆಯ ಅಧಿಕಾರಿಯಿಂದ ಸಮಾಜದ ಬಡಜನರ ಅಭಿವೃದ್ಧಿ ಸಾಧ್ಯವಿಲ್ಲ, ನಿರ್ಲಕ್ಷ್ಯತನ ತೋರುವ ಈ ಅಧಿಕಾರಿಯ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳ ಮುಂಖಾಂತರ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಮತ್ತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಆಟೋ ಶಿವರಾಜ್, ದಲಿತ ಸಂಘರ್ಷ ರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಟಿ.ಸಿ.ಸುರೇಶ್, ಅಂಬೇಡ್ಕರ್ ಪ್ರಚಾರ ಸಮಿತಿ ಯುವ ಘಟಕದ ಜಿಲ್ಲಾಧ್ಯಕ್ಷ ಕೆ.ಗೋವಿಂದರಾಜ್, ದಸಂಸ ನಗರ ಅಧ್ಯಕ್ಷ ಎಸ್.ಲಕ್ಷ್ಮೀನಾರಾಯಣ, ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾ ಉಪಾಧ್ಯಕ್ಷ ಜಿ.ಸಿ.ಸಿದ್ಧಲಿಂಗಯ್ಯ, ದಲಿತ ಪ್ರಜಾಸೇನೆ ರಾಜ್ಯ ಉಪಾಧ್ಯಕ್ಷ ಟಿ.ಡಿ.ಮೂರ್ತಿ, ಮುಖಂಡರಾದ ಸಿ.ಮಾರುತಿ, ಕೆ.ಎನ್.ಸಿದ್ಧಲಿಂಗಯ್ಯ, ನರಸಿಂಹಮೂರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.