ತುಮಕೂರು: ಕೊಳಚೆ ನೀರು ಮತ್ತು ನೀರಿನ ಗುಣಮಟ್ಟವನ್ನು ಪರೀಕ್ಷಿಸಲು ನೂತನವಾಗಿ ಎಐಸಿಟಿಇ ನವದೆಹಲಿ, ಪ್ರಯೋಜಕತ್ವದಲ್ಲಿ ಎನ್‍ವೈರ್ನ್ಮೆಂಟಲ್ ಇಂಜಿನಿಯರಿಂಗ್ ಪ್ರಯೋಗಾಲಯಕ್ಕೆ ಇಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಜಿ.ಪರಮೇಶ್ವರ ಚಾಲನೆ ನೀಡಿದರು.
ನಗರದ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ವತಿಯಿಂದ ಅಯೋಜಿಸಿದ್ದ ಪ್ರಯೋಗಾಲಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಪ್ರಯೋಗಾಲಯದಲ್ಲಿ ನೀರಿನ ಗುಣಮಟ್ಟವನ್ನು ಪರೀಕ್ಷಿಸಿ, ಸಂಶೋಧನೆ ನಡೆಸಿ ಮತ್ತು ನಮೂನೆಯ ನೀರಿನ ಗುಣಮಟ್ಟದ ಬಗ್ಗೆ ತಿಳಿಸಲಾಗುವುದು, ಶುದ್ಧ ನೀರು ಹಲವಾರು ಕಾಯಿಲೆಗಳನ್ನು ನಿಯಂತ್ರಿಸುತ್ತದೆ ಎಂದರು.
ಪರಿಸರದ ಬಗ್ಗೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಸಬೇಕು. ಜಾಗತಿಕ ಮಟ್ಟದಲ್ಲಿನ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಅದು ಕೇವಲ ಆ ದಿನಕ್ಕೆ ಮಾತ್ರ ಸೀಮಿತವಾಗಬಾರದು. ಪ್ರತಿದಿನ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸಿದರೆ ಮಾತ್ರ ಆರೋಗ್ಯ ಉತ್ತಮವಾಗಿರಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯದ ಉಪಕುಲಪತಿ ಡಾ.ಪಿ.ಬಾಲಕೃಷ್ಣ ಶೆಟ್ಟಿಯವರು ಪ್ರಯೋಗಾಲಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಆಧುನಿಕ ಗುಣಮಟ್ಟದ ಪ್ರಯೋಗಾಲಯದಿಂದ ವಿದ್ಯಾರ್ಥಿಗಳ ಕಲಿಕೆಯಲ್ಲಿ ಮತ್ತು ಕೆಲಸಕ್ಕೆ ಅನುಕೂಲಕರವಾಗಲಿದೆ ಎಂದು ಅವರು ತಿಳಿಸಿದರು.
ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಸ್. ರವಿಪ್ರಕಾಶ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಇದು ಕೇವಲ ಸಿವಿಲ್ ವಿಭಾಗವಲ್ಲದೆ ಇತರೆ ಎಲ್ಲಾ ವಿಭಾಗಗಳಲ್ಲಿಯೂ ಸಂಶೋಧನೆ ಕಾರ್ಯಗಳು ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಸಿವಿಲ್ ವಿಭಾಗದ ಮುಖ್ಯಸ್ಥರು ಮತ್ತು ಎನ್‍ವೈರ್ನ್ಮೆಂಟಲ್ ಇಂಜಿನಿಯರಿಂಗ್ ಪ್ರಯೋಗಾಲಯ ಸಂಯೋಜಕರಾದ ಡಾ.ಟಿ.ವಿ.ಮಲ್ಲೇಶ್ ಪ್ರಯೋಗಾಲಯದ ವರದಿಯನ್ನು ಮಂಡಿಸಿದರು.
ಸಾಹೇ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಎಂ.ಝಡ್.ಕುರಿಯನ್, ಎಸ್‍ಎಸ್‍ಐಟಿ ಡೀನ್ (ಶೈಕ್ಷಣ ಕ) ಡಾ.ಎಂ.ಸಿದ್ದಪ್ಪ, , ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಶೀಲ್ ಚಂದ್ರ ಮಹಾಪಾತ್ರ, ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರವೀಣ್ ವಿ ಕುಡ್ವ, ಡಾ.ವೈ.ಎಂ.ರೆಡ್ಡಿ, ವೈದ್ಯಕೀಯ ಕಾಲೇಜಿನ ಮೇಲ್ವಿಚಾರಕ ವೆಂಕಟೇಶ್, ನಿವೃತ್ತ ಎಸ್‍ಎಸ್‍ಐಟಿ ಪ್ರಾಂಶುಪಾಲರಾದ ಡಾ.ಎಂ.ಕೆ ವೀರಯ್ಯ ಹಾಗೂ ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರುಗಳು ಹಾಜರಿದ್ದರು.