ತುಮಕೂರು:ಮುಂಬರುವ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಗೆ ಟಿಕೇಟ್ ನೀಡಬೇಕೆಂದು ಸೂಫ್ಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಇಮ್ತಿಯಾಜ್ ಅಹಮದ್ ಬುಧವಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಅವರಿಗೆ ಅರ್ಜಿ ಸಲ್ಲಿಸಿದರು.
ಎಐಸಿಸಿ ಮತ್ತು ಕೆಪಿಸಿಸಿ ನಿರ್ದೇಶನದಂತೆ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಗೆ ಸ್ಪರ್ಧಿಸ ಬಯಸುವ ಅಭ್ಯರ್ಥಿಗಳು ಕೆಪಿಸಿಸಿ ಬಿಡುಗಡೆ ಮಾಡಿರುವ ಅರ್ಜಿ ನಮೂನೆಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಆಯಾಯ ಜಿಲ್ಲಾಧ್ಯಕ್ಷರಿಗೆ ಸೆಪ್ಟಂಬರ್ 30ರೊಳಗೆ ಅರ್ಜಿಸಲ್ಲಿಸುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಇಂದು ಕೆಪಿಸಿಸಿ ಅಸಂಘಟಿತ ವಲಯದ ಕಾರ್ಮಿಕ ಘಟಕದ ರಾಜ್ಯ ಉಪಾಧ್ಯಕ್ಷ ಡಾ.ಇಮ್ತಿಯಾಜ್ ಅಹಮದ್ ತಮ್ಮ ಅಪಾರ ಬೆಂಬಲಿಗರೊಂದಿಗೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ತೆರಳಿ ತಮ್ಮ ಅರ್ಜಿ ನೀಡಿದರು.
ಈ ವೇಳೆ ಮಾತನಾಡಿದ ಡಾ.ಇಮ್ತಿಯಾಜ್ ಅಹಮದ್,ಕಳೆದ 75 ವರ್ಷಗಳಲ್ಲಿ ತುಮಕೂರು ಜಿಲ್ಲೆಯಿಂದ ಸ್ಥಳೀಯ ಸಂಸ್ಥೆಗಳ ಇತಿಹಾಸದಲ್ಲಿ ಒಮ್ಮೆಯೂ ಅಲ್ಪಸಂಖ್ಯಾತರಿಗೆ ಸ್ಪರ್ಧಿಸಲು ಅವಕಾಶ ನೀಡಿಲ್ಲ.ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ಕೇವಲ ಮತ ಬ್ಯಾಂಕಾಗಿ ಬಳಸಿಕೊಂಡಿದೆ.ಹಾಗಾಗಿ ಈ ಬಾರಿಯ ಸ್ಪರ್ಧೆಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ನನಗೆ ಟಿಕೇಟ್ ನೀಡಬೇಕೆಂಬುದು ನಮ್ಮ ಒತ್ತಾಯವಾಗಿದೆ.ಕಳೆದ 10 ವರ್ಷಗಳಿಗೂ ಹೆಚ್ಚು ಕಾಲದಿಂದ ಪಕ್ಷ ಸಂಘಟನೆ ಯಲ್ಲಿ ತೊಡಗಿದ್ದೇನೆ.ಹಾಗಾಗಿ ನನಗೆ ಟಿಕೇಟ್ ನೀಡಬೇಕೆಂಬುದು ನನ್ನ ಹಿತೈಷಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಒತ್ತಾಯವಾಗಿದೆ ಎಂದರು.
ಅಲ್ಪಸಂಖ್ಯಾತ ಸಮುದಾಯದವರಿಗೆ ಟಿಕೇಟ್ ನೀಡಬೇಕೆಂದು ಈಗಾಗಲೇ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ವಿರೋಧಪಕ್ಷದ ನಾಯಕರಾದ ಸಿದ್ದರಾಮಯ್ಯ,ಕೆಪಿಸಿಸಿ ಮಾಜಿ ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ್,ಅಲ್ಪಸಂಖ್ಯಾತ ಮುಖಂಡ ರಾದ ಜಮೀರ್ ಅಹಮದ್ ಖಾನ್ ಸೇರಿದಂತೆ ಎಲ್ಲರಿಗೂ ಈಗಾಗಲೇ ಮನವಿ ಮಾಡಲಾಗಿದೆ.ಅವರುಗಳು ಸಹ ಸರಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಡಾ.ಇಮ್ತಿಯಾಜ್ ತಿಳಿಸಿದರು.
ಈ ವೇಳೆ ನಿಶಾದ್,ಡೇವಿಡ್,ಝಿಬ್ರಾನ್, ಮೆಹಬೂಬ್ ಪಾಷ, ಸುಹೇಲ್ ಪಾಷ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಜೊತೆಗಿದ್ದರು.