ತುಮಕೂರು: ಹೊಟ್ಟೆಪಾಡಿಗೆ ದಲಿತರು ನಾಯಕರು ಬಿಜೆಪಿಯಲ್ಲಿ ಇದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಬಿಜೆಪಿ ಎಸ್ಸಿ ಮೋರ್ಚಾ ಘಟಕದ ವತಿಯಿಂದ ನಗರದ ಟೌನ್‍ಹಾಲ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ವೈ.ಎಚ್.ಹುಚ್ಚಯ್ಯ ನೇತೃತ್ವದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಸಿದ್ಧರಾಮಯ್ಯ ವಿರುದ್ಧ ದಿಕ್ಕಾರ ಕೂಗಿ ಕೂಡಲೇ ದಲಿತರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು. ಪ್ರತಿಭಟನಾಕಾರರನ್ನುದ್ಧೇಶಿಸಿ ಮಾತನಾಡಿದ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ವೈ.ಎಚ್.ಹುಚ್ಚಯ್ಯ, ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರಿದ್ದಾರೆ ಎಂದು ದಲಿತರನ್ನು ಅವಮಾನ ಮಾಡಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ ದಲಿತರ ಸ್ವಾಭಿಮಾನವನ್ನು ಕೆಣಕಿದ್ದಾರೆ.
ಸಿದ್ಧರಾಮಯ್ಯ ಅವರ ಈ ಹೇಳಿಕೆಯನ್ನು ಖಂಡಿಸಿ ರಾಜ್ಯಾದ್ಯಂತ ಇಂದು ಬಿಜೆಪಿ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಸಂವಿಧಾನದ ಆಶಯದಲ್ಲಿ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಚೌಕಟ್ಟಿನಲ್ಲಿ ಇರುವಂತಹ ರಾಜಕೀಯ ಪಕ್ಷಗಳನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ, ಸ್ವಾತಂತ್ರ್ಯ ಜನಸಾಮಾನ್ಯರಿಗಿದೆ.
ಹಾಗೆ ಕಾಂಗ್ರೆಸ್‍ನ್ನು ಆಯ್ಕೆಮಾಡಿಕೊಂಡಂತಹವರು ಕೆಲವರಿದ್ದರೆ, ಬಿಜೆಪಿ ಮತ್ತು ಇತರೆ ಪಕ್ಷಗಳನ್ನು ಆಯ್ಕೆಮಾಡಿಕೊಳ್ಳಲು ಪ್ರತಿಯೊಬ್ಬರಿಗೂ ಹಕ್ಕಿದೆ ಎಂದರು. ಬಿಜೆಪಿಯಲ್ಲಿ ದಲಿತರು ಹೊಟ್ಟೆಪಾಡಿಗಾಗಿ ಇದ್ದಾರೆ ಎಂಬ ಸಿದ್ಧರಾಮಯ್ಯ ಅವರ ಹೇಳಿಕೆಯನ್ನು ನೋಡಿದರೆ ಸಿದ್ಧರಾಮಯ್ಯ ಅವರಿಗೆ ಹುಚ್ಚು ಹಿಡಿದಿದೆ. ಮಾನಸಿಕ ಅಸ್ವಸ್ಥತೆಯಲ್ಲಿರುವ ಸಿದ್ಧರಾಮಯ್ಯ ಅವರನ್ನು ಮನೋ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸುವ ಅಗತ್ಯವಿದೆ ಎಂದು ಹೇಳಿದರು.
ದಲಿತರು ಪ್ರಬುದ್ಧರಿದ್ದಾರೆ, ವಿದ್ಯಾವಂತರಿದ್ದಾರೆ, ಸಶಕ್ತರಿದ್ದಾರೆ, ದಲಿತರು ಏನನ್ನಾದರೂ ಸಾಧನೆ ಮಾಡುವಂತಹ ಶಕ್ತಿ ದಲಿತರಿಗಿದೆ. ಅಂತಹ ಶಕ್ತಿವಂತಹ ದಲಿತರನ್ನು ಹೊಟ್ಟೆಪಾಡಿಗಾಗಿ ಇದ್ದಾರೆ ಎಂದು ಹೇಳಿದರೆ ಸ್ವಾತಂತ್ರ್ಯ ಬಂದು 74 ವರ್ಷದಲ್ಲಿ ದಲಿತರ ಹೊಟ್ಟೆಪಾಡನ್ನು ನೀಗಿಸಿದ್ದೀರಾ.?, ನಿಮಗೆ ನಾಚಿಕೆ ಆಗಲ್ವ, ಮನುಷ್ಯತ್ವ ಇಲ್ವ, ಮಾನಮರ್ಯಾದೆ ಇಲ್ವ, ಓರ್ವ ಮಾಜಿ ಸಿಎಂ ಆಗಿ, ವಿಪಕ್ಷ ನಾಯಕನಾಗಿ ಭಾಷೆ ಮೇಲೆ ಹಿಡಿತವಿಲ್ಲದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.
ಇಂದು ಕಾಂಗ್ರೆಸ್‍ನಲ್ಲಿ ನಿಮ್ಮ ಸಹಪಾಠಿಗಳಾಗಿ ಕೆಲಸ ಮಾಡುತ್ತಿರುವವರೆಲ್ಲಾ ಹೊಟ್ಟೆಪಾಡಿಗಾಗಿ ಇದ್ದಾರಾ.? ನೀವು ದಳದಲ್ಲಿ ಇದ್ದಂತಹವರು ರಾಜಕಾರಣ ಮಾಡಿಕೊಂಡು ಕಾಂಗ್ರೆಸ್‍ಗೆ ಹೊಟ್ಟೆಪಾಡಿಗಾಗಿ ಬಂದಿದ್ದೀರಾ.? ಸ್ವಲ್ಪ ನಾಲಗೆ ಬಿಗಿ ಹಿಡಿದು ಮಾತನಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದು ಕಾಂಗ್ರೆಸ್‍ನ ಉಸಿರು ದಲಿತರು ಎಂಬುದನ್ನು ಮರೆಯಬೇಡಿ, ದಲಿತರಿಂದ ಇಂದು ಕಾಂಗ್ರೆಸ್ ಉಸಿರಾಡುತ್ತಿದೆ. ಬರೀ ಮಾತಿನಲ್ಲೇ ದಲಿತರನ್ನು ತೃಪ್ತಿಪಡಿಸಿ ಅಧಿಕಾರಕ್ಕೆ ಬರುತ್ತಿರುವ ಕಾಂಗ್ರೆಸ್‍ಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ನಿಮಗೆಲ್ಲಿದೆ ಎಂದು ಹೇಳಿದರು. ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಮಾತನಾಡಿ, ದಲಿತ ಸಮುದಾಯ ಬಿಜೆಪಿಯನ್ನು ನಂಬಿ ಬಂದಿದೆ. ಕಾಂಗ್ರೆಸ್ ಅಂದರೆ ದಲಿತರು, ದಲಿತರು ಅಂದ್ರೆ ಕಾಂಗ್ರೆಸ್ ಎನ್ನುವ ಸಂದರ್ಭ ಒಂದಿತ್ತು, ದಲಿತರನ್ನೇ ಮತ ಬ್ಯಾಂಕ್ ಮಾಡಿಕೊಂಡು ದೇಶವನ್ನ ಆಳುತ್ತಾ ಬಂದಿತ್ತು. ಆದರೆ ಈಗ ದಲಿತರೂ ಕಾಂಗ್ರೆಸ್ ತೊರೆಯುತ್ತಿದ್ದಾರೆ.
ದಲಿತರನ್ನ ಕಳೆದುಕೊಂಡು ಕಾಂಗ್ರೆಸ್ ಸೋಲುತ್ತಾ, ಅಧಿಕಾರವನ್ನೂ ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹೆಚ್.ಎನ್. ಚಂದ್ರಶೇಖರ್ ಮಾತನಾಡಿ, ನೀವು ಮತ್ತು ನಿಮ್ಮ ಪಕ್ಷ ಇಂತಹ ಕೀಳು ರಾಜಕಾರಣವನ್ನು ಇನ್ನೂ ಎಷ್ಟು ವರ್ಷ ಮಾಡುತ್ತೀರಿ, ಮುಂಚೆಯಿಂದಲೂ ದಲಿತರೆಂದರೆ ಅಷ್ಟೊಂದು ಅಸಹನೆ ಯಾಕೆ, ನಿಮ್ಮ ಕುಟುಂಬ ರಾಜಕಾರಣವನ್ನು ಅಥವಾ ನಿಮ್ಮ ಪಪ್ಪುವಿನ ಸಾಮ್ರಾಜ್ಯವನ್ನು ದಲಿತರು ಬಂದು ವಶಪಡಿಸಿಕೊಳ್ಳುತ್ತಾರೆ ಎಂಬ ಭಯವೇ ಎಂದು ಸಿದ್ಧರಾಮಯ್ಯ ಅವರನ್ನು ಪ್ರಶ್ನಿಸಿದರು. ದಲಿತರು ಗೆದ್ದರೆ ಸಿಎಂ ಸ್ಥಾನ ಕೈತಪ್ಪಿ ಹೋಗುತ್ತದೆ ಎಂಬ ಸ್ವಾರ್ಥ ಮನೋಭಾವದಿಂದ ಕೊರಟಗೆರೆ ಕ್ಷೇತ್ರದಲ್ಲಿ ಪರಮೇಶ್ವರ್ ಅವರ ಸೋಲಿಗೆ ಕಾರಣರಾದವರ್ಯಾರು, ಸುಧಾಕರ್ ಲಾಲ್‍ಗೆ ಹಣ ರವಾನಿಸಿ ಪರಮೇಶ್ವರ್ ಅವರ ಸೋಲಿಗೆ ಕಾರಣರಾಗಿದ್ದು, ನೀವಲ್ಲವೇ ಇದು ಇಡೀ ರಾಜ್ಯಕ್ಕೆ ಗೊತ್ತಿರುವಂತಹ ವಿಷಯ ಎಂದರು.
ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದ 5 ವರ್ಷಗಳ ಅವಧಿಯಲ್ಲಿ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ 9080 ದಲಿತರ ಮೇಲೆ ದೌರ್ಜನ್ಯಗಳು ನಡೆದಿವೆ, ಇವು ದಾಖಲಾದ ದೂರುಗಳು ಇನ್ನು ದಾಖಲಾಗದೇ ಇರುವ ದೂರುಗಳೆಷ್ಟೋ.?, 358 ದಲಿತರ ಕಗ್ಗೊಲೆಗಳಾಗಿವೆ, 908 ದಲಿತ ಮಹಿಳೆಯರ ಮೇಲೆ ಮಾನಭಂಗ ನಡೆದಿದೆ. ಆಳುತ್ತಿದ್ದ ಮುಖ್ಯಮಂತ್ರಿ ದಲಿತ ವಿರೋಧಿಯಾಗಿದ್ದರಿಂದಲೇ ಇಷ್ಟೆಲ್ಲಾ ದಲಿತರ ಮೇಲೆ ದೌರ್ಜನ್ಯಗಳು, ಕಗ್ಗೊಲೆ, ಮಹಿಳೆಯರ ಮಾನಭಂಗದಂತಹ ಕೃತ್ಯಗಳು ನಡೆದಿವೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ನರಸಿಂಹಮೂರ್ತಿ, ರಮೇಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್, ನಗರ ಎಸ್ಸಿ ಮೋರ್ಚಾ ಅಧ್ಯಕ್ಷ ವರದಯ್ಯ, ಟೂಡಾ ಸದಸ್ಯರಾದ ಹನುಮಂತಪ್ಪ, ಪ್ರತಾಪ್, ಕಾರ್ಯದರ್ಶಿ ಸುಶೀಲ್, ಸಂದೀಪ್ ಗೌಡ, ಅಂಜನಮೂರ್ತಿ, ಬಿಜೆಪಿ ನಗರಾಧ್ಯಕ್ಷ ಹನುಮಂತರಾಜು, ಕೊಪ್ಪಳ್ ನಾಗರಾಜ್, ಫರ್ಜಾನಾ ತಬಸ್ಸುಮ್, ಸೌಮ್ಯ, ಮಾರುತಿ ಗಂಗಹನುಮಯ್ಯ ಆನಂದ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.