SOCIAL ACTIVIST

ಅತಿಥಿ ಉಪನ್ಯಾಸಕರು ಬೆಂಗಳೂರು ಚಲೋ ಕಾರ್ಯಕ್ರಮಹಮ್ಮಿಕೊಂಡಿದ್ದು, ಸಿದ್ದಗಂಗಾ ಮಠದಿಂದ ಪಾದಯಾತ್ರೆ ಆರಂಭ

ಅತಿಥಿ ಉಪನ್ಯಾಸಕರು ಬೆಂಗಳೂರು ಚಲೋ ಕಾರ್ಯಕ್ರಮಹಮ್ಮಿಕೊಂಡಿದ್ದು, ಸಿದ್ದಗಂಗಾ ಮಠದಿಂದ ಪಾದಯಾತ್ರೆ ಆರಂಭ
Bangalore Chalo program was organized by the guest lecturer and the walk started from Siddaganga Math

ತುಮಕೂರು:ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ
ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು
ಖಾಯಂಗೊಳಿಸುವಂತೆ ಹಾಗೂ ಸೇವಾ ಭದ್ರತೆ ನೀಡುವಂತೆ ಒತ್ತಾಯಿಸಿ
ಇಂದಿನಿಂದ ಅತಿಥಿ ಉಪನ್ಯಾಸಕರು ಬೆಂಗಳೂರು ಚಲೋ ಕಾರ್ಯಕ್ರಮ
ಹಮ್ಮಿಕೊಂಡಿದ್ದು, ಸಿದ್ದಗಂಗಾ ಮಠದಿಂದ ಪಾದಯಾತ್ರೆ ಆರಂಭಗೊಂಡಿದೆ.
ಸಿದ್ದಗಂಗಾ ಮಠದ ಆವರಣದಲ್ಲಿ ಮಠಾಧ್ಯಕ್ಷರಾದ ಶ್ರೀಸಿದ್ದಲಿಂಗ
ಸ್ವಾಮೀಜಿಯವರು ಅತಿಥಿ ಉಪನ್ಯಾಸಕರ ಪಾದಯಾತ್ರೆಗೆ ಹಸಿರು ನಿಶಾನೆ
ತೋರುವ ಮೂಲಕ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ
ಸ್ವಾಮೀಜಿಗಳು,.ರಾಜ್ಯಾದ್ಯಂತ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ
ಸಾವಿರಾರು ಮಂದಿ ಅತಿಥಿ ಉಪನ್ಯಾಸಕರು ಕಡಿಮೆ ಸಂಬಳಕ್ಕೆ ಸೇವೆ
ಸಲ್ಲಿಸುತ್ತಿದ್ದಾರೆ. ಇವರುಗಳು ಉಪನ್ಯಾಸಕರಾಗಿ ಸೇವೆ ಸಲ್ಲಿಸಬೇಕಾದರೆ
ಕೌಟುಂಬಿಕವಾಗಿ ಮತ್ತು ವೈಯುಕ್ತಿಕವಾಗಿ ಚೆನ್ನಾಗಿರಬೇಕು.ಹಾಗಾಗಿ ಅವರ
ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರಕಾರ ಕ್ರಮ
ಕೈಗೊಳ್ಳಬೇಕು ಎಂದರು.

ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಅಂದಿನ
ಸರಕಾರಕ್ಕೆ ಅತಿಥಿ ಉಪನ್ಯಾಸಕರು ಹೇಗೆ ಬದುಕಬೇಕು ಎಂದು ಪ್ರಶ್ನಿಸಿ, ಕಠಿಣ
ಶಬ್ದಗಳನ್ನು ಬಳಸಿ ಪತ್ರ ಬರೆದಿದ್ದರು.ಈಗ ಅವರೇ
ಮುಖ್ಯಮಂತ್ರಿಗಳಾಗಿರುವುದರಿಂದ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು
ಈಡೇರಿಸಲು ಮುಂದಾಗಬೇಕು. ವರ್ಷದಲ್ಲಿ 8 ತಿಂಗಳು ಮಾತ್ರ ಅತಿಥಿ
ಉಪನ್ಯಾಸಕರಿಗೆ ಸಂಬಳ ಸಿಗುತ್ತಿದೆ. ಇನ್ನು 4 ತಿಂಗಳ ಸಂಬಳ ಸಿಗುತ್ತಿಲ್ಲ ಎಂದು
ಹೇಳಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇವರ ಸಮಸ್ಯೆ
ಚೆನ್ನಾಗಿ ಗೊತ್ತಿದೆ.ಆದ್ದರಿಂದ ಮುಖ್ಯಮಂತ್ರಿಗಳು ಅತಿಥಿ
ಉಪನ್ಯಾಸಕರುಗಳಿಗೆ ಸೇವಾ ಭದ್ರತೆ ಒದಗಿಸಲು ತೀರ್ಮಾನ
ಕೈಗೊಳ್ಳಬೇಕು ಎಂಬ ಆಶಯ ವ್ಯಕ್ತಪಡಿಸಿದ ಶ್ರೀಗಳು,ಅತಿಥಿ ಉಪನ್ಯಾಸಕರ
ಹೋರಾಟ ಯಶಸ್ವಿಯಾಗಲಿ ಎಂದು ಶ್ರೀಗಳು ಇದೇ ಸಂದರ್ಭದಲ್ಲಿ ಶುಭ
ಹಾರೈಸಿದರು.

ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಮನಿ
ಮಾತನಾಡಿ,ಕಳೆದ 38ಕ್ಕೂ ಅಧಿಕ ದಿನಗಳಲ್ಲಿ ರಾಜ್ಯಾದ್ಯಂತ ಅತಿಥಿ
ಉಪನ್ಯಾಕರುಗಳು ಪ್ರತಿಭಟನಾ ಧರಣಿ ನಡೆಸುತ್ತಿದ್ದು, ಇದಕ್ಕೆ
ವಿದ್ಯಾರ್ಥಿಗಳು ಸಹ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.ಆದರೂ ರಾಜ್ಯ ಸರಕಾರ
ನಮ್ಮ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳದೆ ಕಣ್ಣೊರೆಸುವ
ನಿರ್ಧಾರ ಕೈಗೊಂಡಿರುವುದು ನಮಗೆ ತೃಪ್ತಿ ತಂದಿಲ್ಲ. ಹಾಗಾಗಿ ಶ್ರೀಮಠದಿಂದ
ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಿದ್ದೇವೆ.ಅತಿಥಿ ಉಪನ್ಯಾಸಕರ
ಬೇಡಿಕೆಯಾದ ಸೇವಾ ಭದ್ರತೆ ಅಥವಾ ಸೇವೆ ಖಾಯಮಾತಿಯನ್ನು ಬಿಟ್ಟು
ಸರಕಾರ ಇಡಿ ಗಂಟು, ಪುಡಿಗಂಟು ಎಂದು ನಮ್ಮ ಹೋರಾಟದ ದಿಕ್ಕು ತಪ್ಪಿಸಲು
ಮತ್ತು ಅತಿಥಿ ಉಪನ್ಯಾಸಕರ ಕಣ್ಣೊರೆಸುವ ತಂತ್ರ ಮಾಡುತ್ತಿದೆ. ಇದನ್ನು
ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ ಪಾದಯಾತ್ರೆ
ನಡೆಸುತ್ತಿದ್ದೇವೆ.ನಮಗೆ ಇಂದು ಶ್ರೀಗಳು ಆಶೀರ್ವದಿಸಿ ಚಾಲನೆ ಕೊಟ್ಟಿದ್ದಾರೆ
ಎಂದರು.

ರಾಜ್ಯ ಸರಕಾರ ನಮ್ಮ ಒಂದೇ ಒಂದು ಬೇಡಿಕೆಯಾದ ಸೇವೆ
ಖಾಯಮಾತಿಯನ್ನು ಬಿಟ್ಟು ನಮಗೆ ಇಡಿಗಂಟು,ವೇತನ ಹೆಚ್ಚಳ, ಆರೋಗ್ಯ
ವಿಮೆ ಎಂದು ನಮ್ಮ ಹೋರಾಟದ ದಿಕ್ಕು ತಪ್ಪಿಸಲು ರಾಜ್ಯ ಸರಕಾರ ಕುತಂತ್ರ
ನಡೆಸಿದೆ. ನಮ್ಮ ಸೇವೆ ಖಾಯಮಾತಿ ಆಗುವವರೆಗೂ ತಮ್ಮ
ಪ್ರತಿಭಟನೆಯನ್ನು ಬಿಡುವುದಿಲ್ಲ ಎಂದು ಅವರು ಹೇಳಿದರು.

ಸಿದ್ದಗಂಗಾ ಮಠದಿಂದ ಆರಂಭವಾಗಿರುವ ಪಾದಯಾತ್ರೆ ಜನವರಿ ಒಂದರ ರಾತ್ರಿ
ಡಾಬಸ್ ಪೇಟೆಯಲ್ಲಿ ವಾಸ್ತವ್ಯ ಹೂಡಲಿದೆ. ಎರಡನೇ ತಾರೀಕು ನೆಲಮಂಗಲದ

ಶ್ರೀಸಿದ್ದಗಂಗಾ ಪದವಿ ಕಾಲೇಜಿನಲ್ಲಿ ವಾಸ್ತವ್ಯ ಹೂಡಿ, ನಂತರ ಮೂರನೇ ತಾರೀಖು
ಬೆಂಗಳೂರು ನಗರವನ್ನು ಪ್ರವೇಶಿಸಿ ಫ್ರೀಡಂ ಪಾರ್ಕ್‍ವರೆಗೆ ಪಾದಯಾತ್ರೆ
ಮಾಡಿ ಜ.4 ರಂದು ಬೃಹತ್ ಸಮಾವೇಶ ನಡೆಸಲು ಅತಿಥಿ ಉಪನ್ಯಾಸಕರು
ತೀರ್ಮಾನಿಸಿದ್ದಾರೆ.ಈ ಪಾದಯಾತ್ರೆಯಲ್ಲಿ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಿಂದಲೂ
ಸುಮಾರು 1500 ಕ್ಕೂ ಅಧಿಕ ಅತಿಥಿ ಉಪನ್ಯಾಸಕರುಗಳು ಹೆಜ್ಜೆ ಹಾಕಿದ್ದಾರೆ.

ಅತಿಥಿ ಉಪನ್ಯಾಸಕರ ಪಾದಯಾತ್ರೆ ಜಾಲ್ ತಲುಪಿದ ವೇಳೆ ಪಾದಯಾತ್ರಿಗಳನ್ನು
ಭೇಟಿ ಮಾಡಿ ಮಾತನಾಡಿದ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ
ಮಾತನಾಡಿ,ನಿಮ್ಮ ಹೋರಾಟ ನ್ಯಾಯಯುತವಾಗಿದೆ.ನಿಮ್ಮ ಬೇಡಿಕೆಯನ್ನು
ಮುಖ್ಯಮಂತ್ರಿಗಳ ಗಮನಕ್ಕೆ ಇಂದೇ ತರುತ್ತೇನೆ.10 ನಿಮಿಷಗಳ
ಕಾಲಾವಕಾಶವನ್ನು ಕೇಳಿದ್ದೇನೆ. ಸಂಜೆ ನಾಲ್ಕರಿಂದ ಐದು ಗಂಟೆಯ ಒಳಗೆ
ನಿಡಿದ್ದಾರೆ. ಆ ವೇಳೆ ನಿಮ್ಮ ಬಗ್ಗೆ ಪ್ರಸ್ತಾಪಿಸುತ್ತೇನೆ.ನಾನು ಉನ್ನತ ಶಿಕ್ಷಣ
ಸಚಿವನಾಗಿದ್ದ ವೇಳೆ ಸುಮಾರು 1300 ಅತಿಥಿ ಉಪನ್ಯಾಸಕರನ್ನು
ಖಾಯಂಗೊಳಿಸಿದೆ.ಹತ್ತಾರು ವರ್ಷಗಳಿಂದ ಗಮನಿಸುತ್ತಿದ್ದೇನೆ.

14 ಸಾವಿರ ರೂಗಳಿಂದ ಕೆಲಸ ಆರಂಭಿಸಿ,ಹತ್ತಾರು ಹೋರಾಟಗಳ ಫಲವಾಗಿ ಇಂದು 25 ಸಾವಿರ
ರೂ ಪಡೆಯುತಿದ್ದಾರೆ. ಇಂತಹ ಉರಿ ಬಿಸಿಲಿನಲ್ಲಿ ನೀವು ನಡೆಯುತ್ತಿರುವುದನ್ನು
ನೋಡಿ, ನಿಮ್ಮೊಂದಿಗೆ ಮಾತನಾಡಿ ಬೆಂಬಲ ವ್ಯಕ್ತ ಪಡಿಸಿ ಹೋಗಲು ಬಂದಿದ್ದೇನೆ.
ನಿಮ್ಮೆಲ್ಲಾ ಬೇಡಿಕೆಗಳ ಬಗ್ಗೆ ಅರಿವಿದೆ. ಈ ಕುರಿತು ಮಾತನಾಡುತ್ತೇನೆ ಎಂದು
ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಲೋಕೇಶ್ ತಾಳಿಕೋಟೆ,ಪ್ರಗತಿ ಪರ ಚಿಂತಕರಾದ
ಕೆ.ದೊರೈರಾಜು,ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ
ಡಾ.ಧರ್ಮವೀರ್,ಡಾ.ಮಲ್ಲಿಕಾರ್ಜುನ್,ಡಾ.ಶಿವಣ್ಣ ತಿಮ್ಲಾಪೂರ್,ಶಂಕರ್ ಹಾರೋಗೆರೆ
ಸೇರಿದಂತೆ ಸಾವಿರಾರು ಜನ ಅತಿಥಿ ಉಪನ್ಯಾಸಕರು ಪಾದಯಾತ್ರೆಯಲ್ಲಿ
ಪಾಲ್ಗೊಂಡಿದ್ದರು.

Share this post

About the author

Leave a Reply

Your email address will not be published. Required fields are marked *