ತುಮಕೂರು: ನಗರದ ಮರಳೂರು ದಿಣ್ಣೆ ಮೂರನೇ ಕ್ರಾಸ್‌ನಲ್ಲಿ ವಾಸಿಸುತ್ತಿರುವ ದಿವಂಗತ ಅಬ್ದುಲ್ ಬಾಬಾ ಅವರ ಕುಟುಂಬಕ್ಕೆ ರೆಸ್ಪಾನ್ಸಿವ್ ಕೇರ್ ಫೌಂಡೇಶನ್ ಹಾಗೂ ಕಾಂಗ್ರೆಸ್ ಮುಖಂಡ ಮತ್ತು ಸಮಾಜ ಸೇವಕ ಇಕ್ಬಾಲ್ ಅಹಮದ್ ಅವರ ಸಹಯೋಗದಲ್ಲಿ ದಿನಸಿ ಪೆಟ್ಟಿಗೆ ಅಂಗಡಿಯನ್ನು ವಿತರಿಸಲಾಯಿತು.
ನಾಲ್ಕು ಹೆಣ್ಣುಮಕ್ಕಳನ್ನು ಪೋಷಿಸುತ್ತಿರುವ ವಿಧವೆ ತಾಯಿಗೆ ಸ್ವಯಂ ಉದ್ಯೋಗದ ಮೂಲಕ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ಈ ಸಹಾಯ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಇಕ್ಬಾಲ್ ಅಹಮದ್ ಅವರು ರೆಸ್ಪಾನ್ಸಿವ್ ಕೇರ್ ಫೌಂಡೇಶನ್ ಮುಖ್ಯಸ್ಥರಾದ ರಹಮತ್ ಅಲಿ, ಮೊಯಿನುದ್ದೀನ್ ರಹಮಾನ್ ಹಾಗೂ ಪತ್ರಕರ್ತ ಸೈಯದ್ ಯೂಸುಫ್ ಉಲ್ಲಾ ಅವರೊಂದಿಗೆ ಅಂಗಡಿಯನ್ನು ಉದ್ಘಾಟಿಸಿ ಕುಟುಂಬಕ್ಕೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಇಕ್ಬಾಲ್ ಅಹಮದ್ ಅವರು, ಕೊರೋನಾ ಸಮಯದಲ್ಲಿ ನಿರ್ಗತಿಕರಿಗೆ ರೇಷನ್ ಕಿಟ್ ವಿತರಿಸುವ ಕಾರ್ಯದಲ್ಲಿ ದಿವಂಗತ ಅಬ್ದುಲ್ ಬಾಬಾ ಅವರು ನಮ್ಮೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ರಂಜಾನ್ ತಿಂಗಳಲ್ಲಿ ಅನಾರೋಗ್ಯದಿಂದ ಅವರು ನಿಧನರಾಗಿದ್ದು, ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಸಂತಾಪ ಸೂಚಿಸಿದರು.
ಇದೇ ವೇಳೆ ಜಕಾತ್ ಮಹತ್ವದ ಬಗ್ಗೆ ಮಾತನಾಡಿದ ಅವರು, ಇಸ್ಲಾಂ ಧರ್ಮದಲ್ಲಿ ಐದು ಸ್ತಂಭಗಳಿದ್ದು, ಅವುಗಳಲ್ಲಿ ನಾಲ್ಕನೇ ಸ್ತಂಭವಾದ ಜಕಾತ್ ಅತ್ಯಂತ ಪ್ರಮುಖವಾಗಿದೆ. ತಮ್ಮ ಆದಾಯದ ಶೇಕಡಾ 2.5 ಭಾಗವನ್ನು ಬಡವರು ಮತ್ತು ನಿರ್ಗತಿಕರಿಗೆ ನೀಡುವುದು ಜಕಾತ್‌ನ ಉದ್ದೇಶವಾಗಿದೆ ಎಂದು ಹೇಳಿದರು.
ಮುಸ್ಲಿಂ ಸಮುದಾಯದ ಜನರಲ್ಲಿ ಜಕಾತ್ ನೀಡುವ ಬಗ್ಗೆ ಮನವಿ ಮಾಡಿದ ಅವರು, “ಜಕಾತ್ ಅನ್ನು ಕೇವಲ ಒಂದು ದಿನದ ಹಸಿವು ನೀಗಿಸಲು ನೀಡುವುದಕ್ಕಿಂತ, ಒಂದು ಕುಟುಂಬದೊಂದಿಗೆ ನಿಂತು ಅವರ ಜೀವನವನ್ನು ಶಾಶ್ವತವಾಗಿ ಕಟ್ಟಿಕೊಳ್ಳಲು ಸಹಾಯ ಮಾಡುವುದು ಹೆಚ್ಚು ಮಹತ್ವದ್ದು. ಚೂರುಚೂರುವಾಗಿ ಹಂಚುವುದಕ್ಕಿಂತ ಒಬ್ಬರ ಬದುಕನ್ನು ರೂಪಿಸುವ ದಿಕ್ಕಿನಲ್ಲಿ ಸಹಕಾರ ನೀಡಬೇಕು” ಎಂದು ಹೇಳಿದರು.

ಅಬ್ದುಲ್ ಬಾಬಾ ಅವರ ಕುಟುಂಬದಲ್ಲಿ ನಾಲ್ಕು ಹೆಣ್ಣುಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಕುಟುಂಬ ನಡೆಸುವುದು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ರೆಸ್ಪಾನ್ಸಿವ್ ಕೇರ್ ಫೌಂಡೇಶನ್ ಉತ್ತಮ ಕಾರ್ಯ ನಿರ್ವಹಿಸಿದೆ. ಮುಂದಿನ ದಿನಗಳಲ್ಲಿ ಫೌಂಡೇಶನ್ ಸೇವಾಕಾರ್ಯಗಳಲ್ಲಿ ನಾನು ಕೂಡ ಹೆಚ್ಚಿನ ಮಟ್ಟದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.
ರೆಸ್ಪಾನ್ಸಿವ್ ಕೇರ್ ಫೌಂಡೇಶನ್ ವತಿಯಿಂದ ಬಡ ಮತ್ತು ನಿರ್ಗತಿಕ ಕುಟುಂಬಗಳಿಗೆ ಸ್ವಯಂ ಉದ್ಯೋಗದ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ.
ಫೌಂಡೇಶನ್ ಮತ್ತು ಇಕ್ಬಾಲ್ ಅಹಮದ್ ಅವರ ಸಮಾಜಮುಖಿ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರಾದ ಮಖ್ದೂಮ್ ಅಲಿ, ಖತುನ್ ಬಿ, ಮುಝಮ್ಮಿಲ್ ಖಾನ್, ರೋಶನ್, ಗೌಸ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
