Strict notice for the prevention of atrocities on women and children:
ತುಮಕೂರು: ಮಹಿಳೆಯರು ಮತ್ತು ಮಕ್ಕಳ ಮೇಲೆ ಯಾವುದೇ ದೌರ್ಜನ್ಯಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳುವುದರ ಜೊತೆಗೆ ಅವರಿಗೆ ಸ್ವಯಂ ರಕ್ಷಣೆ ಕುರಿತು ಮಾರ್ಗದರ್ಶನ ನೀಡಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲ ಎಸ್. ಕುಂದರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಮಹಿಳಾ ಕಾರ್ಯಕ್ರಮಗಳು ಹಾಗೂ ಕುಂದು ಕೊರತೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಈ ದೌರ್ಜನ್ಯ ತಡೆಗೆ ಜಿಲ್ಲಾ ಮಟ್ಟದ ಆಂತರಿಕ ದೂರು ಸಮಿತಿ (Internal Complaints Committee (ICC)) ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಹತ್ತು ಮಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕೆಲಸ ಮಾಡುವ ಸ್ಥಳದಲ್ಲಿ ಕಡ್ಡಾಯವಾಗಿ ಆಂತರಿಕ ದೂರು ಸಮಿತಿಯನ್ನು ಸ್ಥಾಪಿಸಿ, ದೌರ್ಜನ್ಯ ತಡೆ ಕುರಿತು ಅರಿವು ಮೂಡಿಸಬೇಕು ಎಂದರಲ್ಲದೇ ಆಂತರಿಕ ದೂರು ಸಮಿತಿ ಕಾರ್ಯವೈಖರಿ ಹಾಗೂ ಜವಾಬ್ದಾರಿಗಳ ಬಗ್ಗೆ ಕಮಿಟಿ ಸದಸ್ಯರಿಗೆ ಅರಿವು ಮೂಡಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ/ ಆಶಾ ಕಾರ್ಯಕರ್ತೆಯರಿಗೆ ಯಾವುದೇ ರೀತಿಯ ಆರೋಗ್ಯ ರಕ್ಷಣಾ ಕಾರ್ಯಕ್ರಮಗಳನ್ನು ರೂಪಿಸಿಲ್ಲ ಎಂಬ ಆರೋಪಗಳು ಕಾರ್ಯಕರ್ತರಿಂದ ಕೇಳಿ ಬರುತ್ತಿದ್ದು, ಅಧಿಕಾರಿಗಳು ಆಶಾ ಕಾರ್ಯಕರ್ತೆಯರ ಆರೋಗ್ಯ ರಕ್ಷಣೆಗೆ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿನ ಮಹಿಳೆಯರು ಮತ್ತು ಮಕ್ಕಳು ಶೌಚಾಲಯಗಳ ಬಳಕೆ ಮಾಡದೆ ಬಯಲು ಬಹಿರ್ದೆಸೆಯನ್ನೇ ಅವಲಂಬಿಸಿದ್ದಾರೆ. ಇದರ ಪರಿಣಾಮ ದೌರ್ಜನ್ಯ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಹಾಗಾಗಿ ಶೌಚಾಯಲಗಳ ಸದ್ಬಳಕೆ ಕುರಿತು ಗ್ರಾಮ ಪಂಚಾಯ್ತಿಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳು ಅರಿವು ಮೂಡಿಸಬೇಕು ಎಂದರು.
ಶಾಲಾ-ಕಾಲೇಜುಗಳ ಸುತ್ತಮುತ್ತಲಿನ ಅಂಗಡಿಗಳಲ್ಲಿ ಮಾದಕ ದ್ರವ್ಯಗಳು ದೊರೆಯುತ್ತಿರುವುದರಿಂದ ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗುತ್ತಿದ್ದಾರೆ. ಪೊಲೀಸ್ ಇಲಾಖೆ ಈ ಬಗ್ಗೆ ಹೆಚ್ಚು ನಿಗಾ ವಹಿಸಿ, ಶಾಲಾ-ಕಾಲೇಜುಗಳ ಸುತ್ತಮುತ್ತ ಗಸ್ತು ಪೊಲೀಸರನ್ನು ನಿಯೋಜಿಸಬೇಕು. ಸುತ್ತ ಮುತ್ತಲಿನ ಅಂಗಡಿಗಳಲ್ಲಿ ಮಾದಕ ದ್ರವ್ಯ ಮಾರಾಟ ಮಾಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದರಲ್ಲದೆ, ಪೊಲೀಸ್ ಠಾಣೆಗಳಿಗೆ ಮಹಿಳೆಯರು ಬರುವುದಕ್ಕೆ ಹೆದರುತ್ತಿರುವ ಪ್ರಸಂಗ ಇನ್ನೂ ಬಹುತೇಕ ಕಡೆ ದೂರವಾಗಿಲ್ಲ. ಆದ್ದರಿಂದ ಮಹಿಳೆಯರಲ್ಲಿನ ಭಯ ಹೋಗಲಾಡಿಸುವ ಕುರಿತು ಮಹಿಳಾ ಪೊಲೀಸ್ ಅಧಿಕಾರಿಗಳಿಂದ ಅರಿವು ಮೂಡಿಸಬೇಕು ಎಂದರು.
ಶಾಲಾ-ಕಾಲೇಜುಗಳ ಸುತ್ತಮುತ್ತಲಿನ ಅಂಗಡಿಗಳಲ್ಲಿ ಮಾದಕ ದ್ರವ್ಯಗಳು ದೊರೆಯುತ್ತಿರುವುದರಿಂದ ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗುತ್ತಿದ್ದಾರೆ. ಪೊಲೀಸ್ ಇಲಾಖೆ ಈ ಬಗ್ಗೆ ಹೆಚ್ಚು ನಿಗಾ ವಹಿಸಿ, ಶಾಲಾ-ಕಾಲೇಜುಗಳ ಸುತ್ತಮುತ್ತ ಗಸ್ತು ಪೊಲೀಸರನ್ನು ನಿಯೋಜಿಸಬೇಕು. ಸುತ್ತ ಮುತ್ತಲಿನ ಅಂಗಡಿಗಳಲ್ಲಿ ಮಾದಕ ದ್ರವ್ಯ ಮಾರಾಟ ಮಾಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದರಲ್ಲದೆ, ಪೊಲೀಸ್ ಠಾಣೆಗಳಿಗೆ ಮಹಿಳೆಯರು ಬರುವುದಕ್ಕೆ ಹೆದರುತ್ತಿರುವ ಪ್ರಸಂಗ ಇನ್ನೂ ಬಹುತೇಕ ಕಡೆ ದೂರವಾಗಿಲ್ಲ. ಆದ್ದರಿಂದ ಮಹಿಳೆಯರಲ್ಲಿನ ಭಯ ಹೋಗಲಾಡಿಸುವ ಕುರಿತು ಮಹಿಳಾ ಪೊಲೀಸ್ ಅಧಿಕಾರಿಗಳಿಂದ ಅರಿವು ಮೂಡಿಸಬೇಕು ಎಂದರು.
ಹೆಣ್ಣು ಮಕ್ಕಳು ವಿದ್ಯಾವಂತರಾದರೆ, ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಬಹುದಾಗಿದೆ. ಆದ್ದರಿಂದ ಎಲ್ಲಾ ಹೆಣ್ಣು ಮಕ್ಕಳು ಉನ್ನತ ಮಟ್ಟದ ಶಿಕ್ಷಣ ಪಡೆಯಬೇಕು. ಹೆಣ್ಣು ಮಕ್ಕಳು 18 ವರ್ಷಕ್ಕೆ ಹಸೆಮಣೆ ತುಳಿಯದೇ, 21 ವರ್ಷದವರೆಗೂ ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂದ ಅವರು, ಸರ್ಕಾರದಿಂದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗಾಗಿ ರೂಪಿಸಿರುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅಧಿಕಾರಿಗಳು ಯೋಜನೆಗಳ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾತನಾಡಿ, ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಾಗಿ ಆಂತರಿಕ ದೂರು ಸಮಿತಿ ಸದಸ್ಯೆಯರಿಗೆ ಹೆಚ್ಚಿನ ಅರಿವು ಮೂಡಿಸಲಾಗುವುದು. ಒಟ್ಟಾರೆ ಈಗಾಗಲೇ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಕ್ರಮ ಕೈಗೊಳ್ಳಲಾಗಿದ್ದು, ಅಧಿಕಾರಿಗಳು ದೌರ್ಜನ್ಯ ಪ್ರಕರಣಗಳು ಜರುಗದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಧಿಕಾರಿಗಳು ಇನ್ನೂ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಲು ಸೂಚನೆ ನೀಡಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶೌಚಾಲಯಗಳ ಸುಸ್ಥಿರ ಬಳಕೆಗೆ ಹಲವಾರು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಅಂಗನವಾಡಿ ಹಾಗೂ ಶಾಲೆಗಳಲ್ಲಿ ಸುಸಜ್ಜಿತ ಶೌಚಾಲಯಗಳ ನಿರ್ಮಾಣಕ್ಕೂ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರವಾಡ್, ಡಿಡಿಪಿಐ ಸಿ.ನಂಜಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಧರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಾಂತ್ವನ ಕೇಂದ್ರಗಳ ನಿರ್ವಹಣಕಾರರು ಹಾಜರಿದ್ದರು.
ಸಭೆಯ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಆವರಣದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಗಳಿಗಾಗಿ ನಡೆಯುತ್ತಿರುವ ತರಬೇತಿ ಸ್ಥಳಕ್ಕೆ ಭೇಟಿ ನೀಡಿ ಮಹಿಳಾ ದೌರ್ಜನ್ಯ ಪ್ರಕರಣಗಳು ವರದಿಯಾದಾಗ ಠಾಣೆಯಲ್ಲಿ ಸ್ನೇಹಪರ ವಾತಾವರಣವನ್ನು ನಿರ್ಮಿಸಿ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕೆಂದು ಕಿವಿಮಾತು ಹೇಳಿದರು.