Politics Public

ನುಡಿದಂತೆ ನಡೆಯುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗಿದೆ ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಆರೋಪ

ನುಡಿದಂತೆ ನಡೆಯುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗಿದೆ  ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಆರೋಪ

Congress party has failed to do as promised; JDS leader KT Shanthakumar has alleged

ತುಮಕೂರು: ಕೊಬ್ಬರಿ ಬೆಳೆಗಾರರು ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಭೇಟಿ ನೀಡಿ, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕ್ವಿಂಟಾಲ್ ಕೊಬ್ಬರಿಗೆ 15000 ರೂ ನೀಡುವ ಭರವಸೆ ನೀಡಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್,ಕೇವಲ 1250 ರೂ ಪ್ರೋತ್ಸಾಹ ಧನ ಘೋಷಿಸುವ ಮೂಲಕ, ನುಡಿದಂತೆ ನಡೆಯುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗಿದೆ ಎಂದು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಆರೋಪಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ತಿಪಟೂರು ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಕೊಬ್ಬರಿ ಬೆಳೆಗಾರರು ತಿಂಗಳಾನುಗಟ್ಟಲೆ ಪ್ರತಿಭಟನೆ ನಡೆಸುವ ವೇಳೆ ಸ್ಥಳಕ್ಕೆ ಆಗಮಿಸಿ, ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದ್ದ ಡಿ.ಕೆ.ಶಿವಕುಮಾರ್ ಅವರು,ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕ್ವಿಂಟಾಲ್ ಕೊಬ್ಬರಿಯನ್ನು 1500 ಸಾವಿರ ರೂಗಳಿಗೆ ಖರೀದಿಸುವ ಭರವಸೆ ನೀಡಿದ್ದರು.

ಸದರಿ ಭರವಸೆಯನ್ನು ನಂಬಿ ರಾಜ್ಯದ ಮಧ್ಯ ಕರ್ನಾಟಕ,ಹಳೆ ಮೈಸೂರು ಭಾಗದ ಸುಮಾರು 35 ವಿಧಾನಸಭಾ ಕ್ಷೇತ್ರಗಳ ಜನರು ಕಾಂಗ್ರೆಸ್‍ಗೆ ಮತ ನೀಡಿ,ಅಧಿಕಾರಕ್ಕೆ ತಂದಿದ್ದಾರೆ. ಹಾಗಾಗಿ ಕೊಬ್ಬರಿ ಬೆಳೆಗಾರರಿಗೆ ನೀಡಿದ ಭರವಸೆ ಈಡೇರಿಸುವುದು ಸರಕಾರದ ಕರ್ತವ್ಯವಾಗಿದೆ ಎಂದರು.

ತುಮಕೂರು ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ಕೊಬ್ಬರಿ ದರ ಕುಸಿತ ಒಂದು ಜ್ವಲಂತ ಸಮಸ್ಯೆಯಾಗಿದೆ.2019-20ರಲ್ಲಿ ಕ್ವಿಂಟಾಲ್ ಕೊಬ್ಬರಿಗೆ 18500 ರಿಂದ 19000 ರೂ ಇತ್ತು.

ತದನಂತರ ಕುಸಿತ ಕಾಣುತ್ತಾ ಬಂದಿದೆ. ಇದರ ವಿರುದ್ದ ರೈತರು ನಿರಂತರ ಹೋರಾಟ ಮಾಡಿದ್ದರ ಫಲವಾಗಿ ನ್ಯಾಫೇಡ್ ಮೂಲಕ ಬೆಂಬಲ ಬೆಲೆಯಲ್ಲಿ ಖರೀದಿಸುವ ಕೊಬ್ಬರಿಗೆ ಕ್ವಿಂಟಾಲ್ ಒಂದಕ್ಕೆ 11,750 ರೂ ನಿಗಧಿ ಪಡಿಸಲಾಗಿತ್ತು.ಆದರೆ ಇಂದು ಕೊಬ್ಬರಿ ಬೆಲೆ ಕ್ವಿಂಟಾಲ್‍ಗೆ 7600 ರಿಂದ 8000 ರೂಗಳಿಗೆ ಇಳಿದಿದೆ.ನ್ಯಾಫೇಡ್ ಮೂಲಕ ಕೊಬ್ಬರಿ ಖರೀದಿಸುತ್ತಿದ್ದರೂ ಗುಣಮಟ್ಟದ ಹೆಸರಿನಲ್ಲಿ ಒಳ್ಳೆಯ ಕೊಬ್ಬರಿಯನ್ನು ಕೊಳ್ಳದೆ ವಾಪಸ್ ಕಳುಹಿಸಲಾಗುತ್ತಿದೆ.

ಒಂದು ಕೊಬ್ಬರಿ 75ಎಂ.ಎಂ ಸುತ್ತಳತೆಗಿಂತ ಕಡಿಮೆ ಇರಬಾರದು,ತೇವಾಂಶ ಶೇ7ರಷ್ಟು ಇರಬೇಕು.ಹೀಗೆ ಹತ್ತು ಹಲವು ಷರತ್ತುಗಳನ್ನು ವಿಧಿಸುವ ಮೂಲಕ ಕೊಬ್ಬರಿ ಮಾರಾಟಕ್ಕೆ ತೊಡಕು ಉಂಟು ಮಾಡಿದೆ ಎಂದು ಆರೋಪಿಸಿದರು.

ಕೊಬ್ಬರಿ ಬೆಲೆ ಕುಸಿತದ ಬಗ್ಗೆ ಸದನದಲ್ಲಿ ತುಮಕೂರು ಜಿಲ್ಲೆಯ ಶಾಸಕರು ಸೇರಿದಂತೆ, ಜೆಡಿಎಸ್ ಮುಖಂಡರಾದ ಹೆಚ್.ಡಿ.ಕುಮಾರಸ್ವಾಮಿ,ಹೆಚ್.ಡಿ.ರೇವಣ್ಣ ಮುಂತಾದವರು ಚರ್ಚೆ ನಡೆಸಿದ್ದರ ಫಲವಾಗಿ ಸರಕಾರ ಇದುವರೆಗೂ ನ್ಯಾಫೇಡ್‍ನಿಂದ ಖರೀದಿಸಿರುವ ಕೊಬ್ಬರಿಯನ್ನು ಹೊರತು ಪಡಿಸಿ, ಮುಂದೆ ಖರೀದಿಸಿರುವ ಕೊಬ್ಬರಿ ಕ್ವಿಂಟಾಲ್ ಒಂದಕ್ಕೆ 1250 ರೂ ಪ್ರೋತ್ಸಾಹ ಧನ ಘೋಷಣೆ ಮಾಡಿದೆ.ನ್ಯಾಫೇಡ್‍ನ 11750 ಮತ್ತು ರಾಜ್ಯ ಸರಕಾರದ 1250 ಸೇರಿದಂತೆ ಕ್ವಿಂಟಾಲ್ ಕೊಬ್ಬರಿ ಬೆಲೆ 13000 ಆಗಲಿದೆ.ಡಿ.ಸಿ.ಎಂ ಘೋಷಣೆ ಮಾಡಿದ್ದು ಕ್ವಿಂಟಾಲ್ ಕೊಬ್ಬರಿಗೆ 15000 ರೂ, ಹಾಗಾಗಿ ಉಳಿದ 2000 ರೂ ಪ್ರೋತ್ಸಾಹ ಧನವನ್ನು ಕೂಡಲೇ ಘೋಷಣೆ ಮಾಡಬೇಕು.ಈ ವರ್ಷ ಖರೀದಿ ಮಾಡಿರುವ ಎಲ್ಲಾ ಕೊಬ್ಬರಿಗೂ ಈ ಪ್ರೋತ್ಸಾಹಧನ ನೀಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ಶಾಂತಕುಮಾರ್ ತಿಳಿಸಿದರು.

ಪ್ರಕಾಶ ಕಮ್ಮರಡಿ ಅವರ ನೇತೃತ್ವದ ಕೃಷಿ ಉತ್ಪನ್ನಗಳ ಬೆಲೆ ನಿಗಧಿ ಆಯೋಗ ಮಾಡಿರುವ ಶಿಫಾರಸ್ಸಿನ ಪ್ರಕಾರ ಒಂದು ಕ್ವಿಂಟಾಲ್ ಕೊಬ್ಬರಿ ಬೆಳೆಯಲು ಸುಮಾರು 16000 ರೂ ಖಚ್ರ್ಚಾಗುತ್ತದೆ.ನ್ಯಾಫೇಡ್ ಮತ್ತು ರಾಜ್ಯ ಸರಕಾರದ ಪ್ರೋತ್ಸಾಹ ಧನ ಸೇರಿ 13000 ರೂಗಳಿಗೆ ಕೊಬ್ಬರಿ ಖರೀದಿಯಾದರೆ, ರೈತನಿಗೆ ಒಂದು ಕ್ವಿಂಟಾಲ್ 3000 ರೂ ನಷ್ಟು ಉಂಟಾಗುತ್ತದೆ.

ಹಾಗಾಗಿ ಕೇಂದ್ರ ಸರಕಾರ ಕೊಬ್ಬರಿಯ ವೈಜ್ಞಾನಿಕ ಬೆಂಬಲ ಬೆಲೆಯನ್ನು ಘೋಷಿಸಬೇಕು.ಅಲ್ಲದೆ ಇಂತಿಷ್ಟು ಎಂದು ನಿಗದಿ ಮಾಡದೆ ರೈತರು ಬೆಳೆದಿರುವ ಎಲ್ಲಾ ಕೊಬ್ಬರಿಯನ್ನು ಖರೀದಿಸಬೇಕೆಂದು ಆಗ್ರಹಿಸಿದರು.

ಕೊಬ್ಬರಿ ಬೆಳೆಗಾರರ ಹೋರಾಟಕ್ಕೆ ಬೆಂಬಲ ನೀಡಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಸರಕಾರದ ಜೊತೆಗೆ,ನಮ್ಮ ಜಿಲ್ಲೆಯ ಸಚಿವರಾಗಿದ್ದ ಬಿ.ಸಿ.ನಾಗೇಂದ್ರ ಮತ್ತು ಜೆ.ಸಿ. ಮಾಧುಸ್ವಾಮಿ ಅವರನ್ನು ರೈತರು ಸೋಲಿಸಿ ಮನೆಗೆ ಕಳುಹಿಸಿದ್ದಾರೆ.

ಕಾಂಗ್ರೆಸ್ ಸರಕಾರವೂ ಕೊಬ್ಬರಿ ಬೆಳೆಗಾರರ ವಿರೋಧ ಕಟ್ಟಿಕೊಂಡರೆ ಮುಂದೆ ಜಿಲ್ಲೆಯಲ್ಲಿ ನಷ್ಟ ಅನುಭವಿಸಲಿದೆ ಎಂದು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಆರ್.ಸಿ.ಅಂಜನಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು,ಸೋಲಾರ್ ಕೃಷ್ಣಮೂರ್ತಿ,ಡಾಂಡೇಲಿ ಗಂಗಣ್ಣ, ಚಲುವರಾಜು, ಸೊಗಡು ವೆಂಕಟೇಶ್, ತಾಹೀರಾ ಭಾನು, ಲೀಲಾವತಿ ಮತ್ತಿತರರು ಉಪಸ್ಥಿತರಿದ್ದರು.

Share this post

About the author

Leave a Reply

Your email address will not be published. Required fields are marked *